Thursday, April 26, 2018

Yugadi introduction

ನಮಸ್ಕಾರ. ಸರ್ವರಿಗೂ ಸ್ವಾಗತ ಸುಸ್ವಾಗತ.
ಮಾವಿನ ಒಗರು ಬೇವಿನ ಚಿಗುರು. 
ಕೋಗಿಲೆಯ ಇಂಚರ ಎಲ್ಲೆಲ್ಲೂ ಸಡಗರ.
ನಿರ್ಮಲ ಆಕಾಶ.  ಇನ್ನಿಲ್ಲ ಸಾವಕಾಶ   (ಸಾವಕಾಶದ ಅರ್ಥ = ನಿಧಾನ)
ಬಂದಿದೆ ನಾವೆಲ್ಲಾ ಸಂಭ್ರಮದಿಂದ ಆಚರಿಸುವ ನವವರ್ಷ
ಯುಗಾದಿ ಹಬ್ಬದ ಆಚರಣೆಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಆದರದ ಶುಭಾಶಯಗಳು

ಹೊಸ ವರ್ಷ ಎಲ್ಲೆಲ್ಲೂ ಹರ್ಷ.  ಈ ಆಚರಣೆ ನಮ್ಮ ನಿಮ್ಮದು ಮಾತ್ರವಲ್ಲ.  ಎಲ್ಲೆಲ್ಲೂ ಕಾಣುವ ಪರಿಪಾಠ.  ಆಂಧ್ರ-ತೆಲಂಗಾಣ ಮತ್ತು ನಮ್ಮ ಕನ್ನಡ ನಾಡಿನಲ್ಲಿ ಇದು ಯುಗಾದಿ ಅಥವಾ ಉಗಾದಿ.  ಕೇರಳದಲ್ಲಿ ವಿಶು.  ಅಸ್ಸಾಮಿನಲ್ಲಿ ಬಿಹೂ, ಬಂಗಾಳದಲ್ಲಿ ಪೊಯಿಲ ಬೈಸಾಖ್, ಪಂಜಾಬಿನಲ್ಲಿ ಬೈಸಾಖಿ ಹಾಗೂ ಮಹಾರಾಷ್ಟ್ರದಲ್ಲಿ ಗುಡಿ ಪದ್ವಾ ಎಂದು ಹೊಸ ಸಂವತ್ಸರವನ್ನು ಸ್ವಾಗತಿಸುತ್ತಾರೆ.  ಕೆಲವರಿಗೆ ಹೊಸ ವರ್ಷ ದೀಪಾವಳಿಯಿಂದ ಆರಂಭವಾಗುತ್ತೆ. 

ಅಬ್ಬಾ ಎಷ್ಟು ವೈವಿಧ್ಯತೆ ನಮ್ಮ ದೇಶದಲ್ಲಿದೆ!

ಮಾನವನೆಂದ ಮೇಲೆ ಏಳು ಬೀಳು ಸಹಜ. ಎಲ್ಲರ ಜೀವನವೂ ಸುಖ ದುಃಖಗಳ ಮಿಲನ.  ನಗು ಆಳುಗಳ ಸಂಗಮ. ಮಳೆ ಎಷ್ಟು ಖಚಿತವೋ ಬಿಸಿಲೂ ಸಹ ಅಷ್ಟೇ ಖಂಡಿತ.  ನಮ್ಮ ಯುಗಾದಿಯ ಆಚರಣೆ ಇದನ್ನೇ ಬಿಂಬಿಸುತ್ತದೆ.  ಬೇವು ಬೆಲ್ಲ ತಿನ್ನದೇ ನಾವು ಹಬ್ಬವನ್ನು ಮಾಡಲು ಸಾಧ್ಯವೇ? ಬೇವು ಬೇಡವೆಂದರೂ ಬಾಳಿನಲ್ಲಿ ಕಹಿ ಬರದೇ ಇರುವುದೇ? ಡಯಾಬಿಟಿಸ್ ಇರುವವರೂ ಸಹ ಹಬ್ಬದಂದು ಬೆಲ್ಲವನ್ನು ಬೇಡ ಎನ್ನುವುದಿಲ್ಲ.  ಸಿಹಿ ಮೆಲ್ಲದೆ ನಗು ಎಲ್ಲಿಯದು? ನೋವು ನಲಿವು ಎರಡೂ ಬಾಳಿನಲ್ಲಿ ಅವಳಿ-ಜವಳಿಗಳಂತೆ. 

ಯುಗಾದಿ ನಮ್ಮ ಪಂಚಾಂಗದ ಪ್ರಕಾರ ಚೈತ್ರ ಮಾಸದಿಂದ ಆರಂಭ.  ವಸಂತದ ಆಗಮನವೂ ಇಲ್ಲಿಯೇ.  ಚಳಿಯಲ್ಲಿ ಬೋಳಾದ ಮರಗಳು ನವ ಜೀವ ಪಡೆದು ಚಿಗುರೊಡೆಯುತ್ತವೆ.  ಸೂರ್ಯದೇವನ ಬಿಸಿ ಏರುತ್ತದೆ.  ಹಾಗೆಯೇ ಹೊಂಗೆ ಮರದ ಗಾಳಿ ತಂಪನ್ನು ತರುತ್ತದೆ.  ಪಕ್ಷಿಗಳು ಹಾಡುತ್ತವೆ.  ಹೊಸ ಸೃಷ್ಟಿ ಮೊದಲುಗೊಳ್ಳುತ್ತದೆ.  ಇವನ್ನೆಲ್ಲ ಬಹಳ ಚೆನ್ನಾಗಿ ಬರೆದು ವರ್ಣಿಸಿದ್ದಾರೆ ಡಾII ದ ರಾ ಬೇಂದ್ರೆ ತಮ್ಮ ಕವನದಲ್ಲಿ.  ಯುಗಾದಿ ಹಬ್ಬವೆಂದ ಮೇಲೆ ಅವರ ರಚನೆಯ ಹಾಡನ್ನು ಕೇಳದ ಮನೆ ಮನ ಇಡೀ ಕನ್ನಡ ನಾಡಿನಲ್ಲಿಯೇ ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲ. 

ಈ ವರ್ಷ ಹೇವಿಳಂಬಿ ನಾಮ ಸಂವತ್ಸರ ಎಂದು ಹೇಳುತ್ತಾರೆ.  ಇದು ಸಂವತ್ಸರ ಚಕ್ರದ ೩೧ನೇ ವರ್ಷ.  ಈ ಚಕ್ರದಲ್ಲಿ ಅರವತ್ತು ವರ್ಷಗಳಿವೆ.  ಹೇವಿಳಂಬಿ ಕಡಿಮೆ ಅಥವಾ ನಿಧಾನದಲ್ಲಿ ಮಳೆ ತರುತ್ತದೆ ಎಂದು ಪಂಚಾಗ ನುಡಿಯುತ್ತದೆ. ನಿಧಾನವಾದರೂ ಪರವಾಗಿಲ್ಲ ಆದರೆ ಬರ ನೆರೆ ಇಲ್ಲದೆ ಎಲ್ಲೆಡೆ ಹಸಿರು ಪಸರಿಸಲಿ ಬೆಳೆಗಳು ಅರಳಲಿ ಸುಖ ಸಮೃದ್ಧಿಸಲಿ ನಮ್ಮ ನಾಡು ನುಡಿ ಜನ ಮನ ವರ್ಧಿಸಲಿ ಎಂದು ಹಾರೈಸುತ್ತ ಈ ಕಾರ್ಯಕ್ರಮವನ್ನು ಮೊದಲು ಮಾಡೋಣ. 




0 Comments:

Post a Comment

<< Home